ರಾಜಕೀಯ ತತ್ತ್ವಗಳು - 
	ಒಂದು ದೇಶದ ರಾಜ್ಯಾಡಳಿತ ಯಾವ ನೀತಿ ನೆಲಗಟ್ಟಿನ ಮೇಲೆ ನಡೆಸಲ್ಪಡುತ್ತಿದೆ ಮತ್ತು ಆಡಳಿತಾಧಿಕಾರ ಪಡೆದ ಪಕ್ಷಗಳು ದೇಶದ ಸರ್ವೋನ್ನತಿಯ ಗುರಿಸಾಧನೆಗೆ ಯಾವ ಮಾರ್ಗವನ್ನವಲಂಬಿಸಿವೆ ಎಂಬುದರ ವಿಶ್ಲೇಷಣೆಯ ವಿವಿಧ ರಾಜಕೀಯ ತತ್ತ್ವಗಳು (ಪೊಲಿಟಿಕಲ್ ಫಿಲಾಸಫೀಸ್) ಎನಿಸಿವೆ. ರಾಜಕೀಯಕ್ಕೆ ಸಂಬಂಧಿಸಿದ ಮೂಲ ಪ್ರಶ್ನೆಗಳು, ಉತ್ತರಗಳು, ಇವುಗಳಿಗೆ ಸಂಬಂಧಪಟ್ಟ ಶಬ್ದಕೋಶ ವಿಶ್ಲೇಷಣೆ, ಸಂಶೋಧಾನಾ ವಿಧಿವಿಧಾನಗಳು ಹಾಗೂ ತತ್ತ್ವ ಭಂಡಾರಗಳೇ ರಾಜಕೀಯ ತತ್ತ್ವಶಾಸ್ತ್ರದ ಸಾರವೆನ್ನಬಹುದು. ರಾಜಕೀಯ ಅಧಿಕಾರ ಕುರಿತದ್ದಾಗಿರುತ್ತದೆ ಎನ್ನಬಹುದು. ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ತತ್ತ್ವಗಳಿಗೆ ಅನುಗುಣವಾಗಿ ರಾಜ್ಯಾಡಳಿತ ನಡೆಸಲು ತತ್ತ್ವಗಳನ್ನು ನಿಜ ಜೀವನದಲ್ಲಿ ಅಳವಡಿಸಲು ಆ ಮೂಲಕ ಜನಕಲ್ಯಾಣ ಸಾಧಿಸಲು ಪ್ರಯತ್ನಿಸುವುದುಂಟು. ಎಲ್ಲ ರಾಜಕೀಯ ಪಕ್ಷಗಳೂ ದೇಶದ ಕಲ್ಯಾಣವನ್ನೇ ಬಯಸುವುದು. ಹಾಗೂ ಅದರ ಸಾಧನೆಗಾಗಿ ತಮ್ಮದೇ ಆದ ವಿವಿಧ ಆಡಳಿತ ಮಾರ್ಗವನ್ನು ರೂಪಿಸುವುವು. ರಾಜಕೀಯ ತತ್ತ್ವಗಳನ್ನು ರೂಪಿಸಿದ ದಾರ್ಶನಿಕರು ತಮ್ಮ ತಮ್ಮ ಸಿದ್ಧಾಂತಗಳನ್ನು ರೂಪಿಸಿ ವಿಶದಪಡಿಸಿದ್ದಾರೆ. ಏಕವ್ಯಕ್ತಿಯ ದರ್ಶನ ತತ್ತ್ವಗಳೇ ಸಮಷ್ಟಿಯ ರಾಜಕೀಯ ತತ್ತ್ವಗಳಾಗಿ ಮೆರೆದಿವೆ. ಈ ತತ್ತ್ವಗಳೂ ಕಾಲಕಾಲಕ್ಕೆ ಬದಲಾದದ್ದುಂಟು. ಸುಧಾರಿತ ರೂಪ ಪಡೆದದ್ದುಂಟು. ಹೀಗಾಗಿ ರಾಜಕೀಯ ತತ್ತ್ವಗಳಲ್ಲೂ ನಾವು ವಿವಿಧತೆಯನ್ನು ಗುರುತಿಸಬಹುದಾಗಿದೆ.

	ಮಾನವ ಜೀವನದ ನಿರಂತರ ಸಾಮಾಜಿಕ ಚಟುವಟಿಕೆಗಳಲ್ಲಿ ರಾಜಕೀಯ ಒಂದು. ಸಮಾಜದಲ್ಲಿ ದಂಡಾಧಾರಿತವಾದ ಕಾನೂನು ಮತ್ತು ವ್ಯವಸ್ಥೆಗಳ ಮೂಲಕ ನೀತಿ ನ್ಯಾಯಗಳನ್ನು ಸ್ಥಾಪಿಸುವುದೇ ರಾಜಕೀಯ ತತ್ತ್ವಗಳ ಗುರಿ. ಅರಾಜಕತೆ ಇದರ ವೈರುಧ್ಯ. ಮತ್ಸ್ಯನ್ಯಾಯದ ವಿರುದ್ಧ ಇದು ಒಂದು ದಂಡಸಹಿತ ಹೋರಾಟ. ಆದ್ದರಿಂದಲೇ ನ್ಯಾಯ, ನೀತಿ ನಿಯಮಗಳನ್ನು ರಾಜಕೀಯ ತತ್ತ್ವಗಳು ಒಳಗೊಂಡಿವೆ. ಇದರಿಂದ ರಾಜಕೀಯ ಒಂದು ತತ್ತ್ವಧಾರಿತ ಚಟುವಟಿಕೆ ಎನ್ನಬಹುದು. ನಮ್ಮ ಪೂರ್ವಿಕರು ರಾಜಕೀಯವನ್ನು ದಂಡನೀತಿ, ನೀತಿಶಾಸ್ತ್ರ ಅಥವಾ ಅರ್ಥಶಾಸ್ತ್ರ ಎಂದು ಕರೆದಿರುವುದು ಅರ್ಥ ಪೂರ್ಣವಾಗಿದೆ. 

ರಾಜಕೀಯ ಮತ್ತು ರಾಜಕೀಯ ತತ್ತ್ವಗಳ ಬಗೆಗಿನ ಚಿಂತನೆ ಬಹು ಪುರಾತನವಾದವು. ರಾಜಕೀಯವೆಂದರೇನು? ರಾಜಕೀಯ ಏಕೆ ಬೇಕು? ಇದು ಕೇವಲ ಬಲದ ಅಥವಾ ಬಲಿಷ್ಠರ ಆಟವೇ? ಇದರ ನೈತಿಕಶಕ್ತಿ ಏನು ಅಥವಾ ನೆಲೆಬೆಲೆಗಳು ಏನು? ಇದರ ಇತಿಮಿತಿ ಎಷ್ಟು? ವ್ಯಕ್ತಿ ಮತ್ತು ರಾಜಕೀಯದ ಹಾಗೂ ಸಮಾಜ ಮತ್ತು ರಾಜಕೀಯದ ಸಂಬಂಧಗಳು ಏನು? ಮಾದರಿ ರಾಜ್ಯಗಳೆಂದರೇನು ಮತ್ತು ಯಾವುವು? ಮುಂತಾದ ಪ್ರಶ್ನೆಗಳು ನಿರಂತರವಾಗಿದ್ದು ಇವು ರಾಜಕೀಯ ಚಿಂತನೆಗೆ ಮತ್ತು ತತ್ತ್ವಗಳಿಗೆ ಮೂಲವಾಗಿವೆ. ಐತಿಹಾಸಿಕವಾಗಿ ರಾಜಕೀಯ ಮತ್ತು ರಾಜಕೀಯ ಚಿಂತನೆಗಳ ಆರಂಭಗಳನ್ನು ನಿರ್ದಿಷ್ಟವಾಗಿ ಗುರುತಿಸಲಾಗಿದ್ದರೂ ಪಾಶ್ಚಾತ್ಯ ರಾಜಕೀಯ ಚಿಂತನೆಯನ್ನು ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದಿನ ತತ್ತ್ವe್ಞÁನಿಯಾದ ಪ್ಲೇಟೋವಿನ ಗ್ರಂಥಗಳಿಂದ ಗುರುತಿಸಲಾಗುತ್ತದೆ. ರಾಜಕೀಯ ಪ್ರಶ್ನೆಗಳಿಗೆ ಪ್ರಥಮ ಬಾರಿಗೆ ಗಮನ ಹರಿಸಿ ಸದೃಢವೂ ಉತ್ತಮವೂ ಮತ್ತು ಸರ್ವಕಾಲಿಕವೂ ಆದ ಚಿಂತನೆಗಳನ್ನೊಳಗೊಂಡ ರಿಪಬ್ಲಿಕ್, ಲಾಸ್ ಹಾಗೂ ಸ್ಟೇಟ್ಸ್‍ಮನ್ ಎಂಬ ಮೂರು ಪ್ರಥಮ ರಾಜಕೀಯ ಗ್ರಂಥಗಳನ್ನು ಪ್ಲೇಟೋ ರಚಿಸಿದ. ಪಾಲಿಟಿಕ್ಸ್ ಎಂಬ ಗ್ರಂಥ ರಚಿಸಿದ ಇವನ ಶಿಷ್ಯನಾದ ಅರಿಸ್ಟಾಟಲ್‍ನ ಚಿಂತನೆಗಳನ್ನೂ ನೋಡಿದರೆ ಈ ಗುರುಶಿಷ್ಯರು ಮಟ್ಟದ ರಾಜಕೀಯ ಪ್ರಶ್ನೆಗಳಿಲ್ಲವೆನ್ನಬಹುದು. ಭಾರತದಲ್ಲಿ ವೇದೋಪನಿಷತ್ ಪುರಾಣಗಳೂ ಹಾಗೂ ಮಹಾಕಾವ್ಯಗಳಲ್ಲಿ ರಾಜಕೀಯ ಚಿಂತನೆಗಳು ಅಲ್ಲಲ್ಲಿ ಕಂಡುಬಂದರೂ ಇವುಗಳು ಕ್ರೋಢೀಕರಣಗೊಂಡಿರುವುದು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಎಂದು ಹೇಳಬಹುದು. ರಾಜಪ್ರಭುತ್ವದ ಸುತ್ತ ಹೆಣೆಯಲ್ಪಟ್ಟಿರುವ ಪ್ರಾಚೀನ ಭಾರತದ ರಾಜಕೀಯ ಚಿಂತನೆ ಪಾಶ್ಚಾತ್ಯ ರಾಜಕೀಯ ಚಿಂತನೆಯನ್ನು ವೈವಿಧ್ಯವೂ ಶ್ರೀಮಂತವೂ ಅಲ್ಲವೆಂಬ ಒಂದು ಬಲವಾದ ಟೀಕೆ ಇದೆ. ಇಂದಿನ ವೈe್ಞÁನಿಕ ಯುಗದಲ್ಲಿ ರಾಜಕೀಯ ತತ್ತ್ವಗಳ ಸಂಬಂಧ. ಅದರ ಉಳಿವಿಕೆ ಮತ್ತು ಬೆಳೆಯುವಿಕೆ ಅಥವಾ ಇದರ ವರ್ತಮಾನ, ಭವಿಷ್ಯಗಳು, ಅವಶ್ಯಕತೆ- ಅನಾವಶ್ಯಕತೆ ಇತ್ಯಾದಿ ಪ್ರಶ್ನೆಗಳು ಸದಾ ಇರುವಂತಹುದೇ ಆಗಿದೆ. ಇದಕ್ಕಾಗಿ ರಾಜಕೀಯ ತತ್ತ್ವಗಳ ಅರ್ಥ, ವ್ಯಾಪ್ತಿ, ಅದರ ವಿಧಗಳು ಮತ್ತು ರಾಜ್ಯಶಾಸ್ತ್ರ ಸಂಬಂಧ, ಉಪಯೋಗಗಳು, ಅದರ ವರ್ತಮಾನ ಮತ್ತು ಭವಿಷ್ಯಗಳ ಒಂದು ವೈಚಾರಿಕ ಚಿಂತನೆ ಮಾಡಬಹುದು.

	ರಾಜಕೀಯ ತತ್ತ್ವದ ಅರ್ಥ-ರಾಜಕೀಯದ ಜಿe್ಞÁಸೆಯಾಗಿದೆ ಹಾಗೂ ಅದರ ಮೂಲನಂಬಿಕೆಗಳ ಅಥವಾ ಆಧಾರಸೂತ್ರಗಳ ಬಗೆಗಿನ ವಿಚಾರಧಾರೆಯಾಗಿದೆ ಎನ್ನಬಹುದು. ತಾತ್ತ್ವಿಕ ಚಿಂತನೆಯ ಅಥವಾ ತತ್ತ್ವಶಾಸ್ತ್ರದ ಬೆಳವಣಿಗೆಯ ಜೊತೆಗೆ ರಾಜಕೀಯ ತತ್ತ್ವಗಳ ಬೆಳವಣಿಗೆಯೂ ಕಂಡುಬರುತ್ತದೆ. ರಾಜಕೀಯ ತತ್ತ್ವವೂ ವಾಸ್ತವಿಕ ವಿವರಣೆಗಿಂತ ಹೆಚ್ಚಾಗಿ ರಾಜಕೀಯದ ಮೂಲತತ್ತ್ವಗಳನ್ನು ಅದರ ನೀತಿ ಮೌಲ್ಯಗಳನ್ನು, ತರ್ಕಗಳನ್ನು, ರೂಪಮಾದರಿಗಳನ್ನು ಒಳಗೊಂಡಿದೆ.

	ರಾಜಕೀಯ ತತ್ತ್ವಗಳನ್ನು ರಾಜಕೀಯ ಚಿಂತನೆ, ರಾಜಕೀಯ ಸೂತ್ರ ಮತ್ತು ರಾಜ್ಯಶಾಸ್ತ್ರ ಮುಂತಾದವುಗಳಿಂದ ಬೇರ್ಪಡಿಸಬಹುದು. ರಾಜಕೀಯ ಚಿಂತನೆ ಎಂದರೆ ಒಟ್ಟಾರೆ ರಾಜಕೀಯದ ಬಗೆಗಿನ ಎಲ್ಲಾ ಆಲೋಚನೆಗಳ ಒಂದು ಮೊತ್ತ. ರಾಜಕೀಯ ತತ್ತ್ವ ಎಂದರೆ ವ್ಯವಸ್ಥಿತವಾಗಿ ಮತ್ತು ನೈತಿಕ ನಿಲುವು. ನಂಬಿಕೆಗಳು, ರಾಜಕೀಯ ಸೂತ್ರಗಳೆಂದರೆ ಸಾಮಾನ್ಯವಾಗಿ ಸರ್ವಸಮ್ಮತಿ ಪಡೆದ ತತ್ತ್ವಗಳಿಂದ ಭಟ್ಟಿ ಇಳಿಸಿದ ಮೂಲಭೂತ ನಡುವಳಿಕೆಯ ನಿರ್ಧಾರಾಂಶಗಳು ಎನ್ನಬಹುದು. ರಾಜಕೀಯ ವಿe್ಞÁನ ಅಥವಾ ರಾಜ್ಯಶಾಸ್ತ್ರ ಎಂದರೆ ಇಂದಿನ ವೈe್ಞÁನಿಕ ಯುಗದಲ್ಲಿ ರಾಜಕೀಯದ ವಾಸ್ತವಿಕಾಂಶದ ಮೇಲೆ ಗಮನ ಕ್ರೋಢೀಕರಿಸಿಕೊಂಡ ತರ್ಕಬದ್ಧ, ವ್ಯವಸ್ಥಿತ, ಅನುಭವಾತ್ಮಕ, ಪ್ರಯೋಗಾತ್ಮಕ ವಿಧಿ-ವಿಧಾನಗಳನ್ನು ಅನುಸರಿಸಿ ಬೆಳೆಸಿದ ವ್ಯವಸ್ಥಿತ e್ಞÁನಕೋಶ. ರಾಜಕೀಯ ತತ್ತ್ವe್ಞÁನದಲ್ಲಿ ವಾಸ್ತವಿಕಾಂಶ ವಿಶ್ಲೇಷಣೆಗಿಂತಲೂ ರಾಜಕೀಯ ವ್ಯವಹಾರ ಹಾಗೂ ಸಂಬಂಧಗಳ ನೈತಿಕಾಂಶ ವಿಶ್ಲೇಷಣೆಯೇ ಪ್ರಧಾನ.

ರಾಜಕೀಯ ತತ್ತ್ವದ ಕಾರ್ಯಗಳನ್ನು ಈ ಕೆಳಗಿನಂತೆ ಗುರುತಿಸಬಹುದು. ಮೂಲಭೂತ ರಾಜಕೀಯ ಪ್ರಶ್ನೆಗಳನ್ನು ಗಮನಿಸುವುದು ಹಾಗೂ ಅವುಗಳಿಗೆ ನೈತಿಕ ಉತ್ತರ ಅಥವಾ ಪರಿಹಾರಗಳನ್ನು ಅನ್ವೇಷಿಸುವುದು. ರಾಜಕೀಯ ವ್ಯವಸ್ಥೆ, ವ್ಯವಹಾರ ಮತ್ತು ಸಂಬಂಧಗಳಲ್ಲಿನ ನೈತಿಕ ಸೂತ್ರಗಳನ್ನು ವಿಶ್ಲೇಷಿಸುವುದು. ಆದರ್ಶ ರಾಜಕೀಯ ಮಾದರಿಗಳ ಗುಣಮಟ್ಟಗಳನ್ನು ಸಿದ್ಧಪಡಿಸಿ ಬೆಂಬಲಿಸುವುದು ಹಾಗೂ ಕಾರ್ಯಗಳಿಗೆ ಬೇಕಾದ ರಾಜಕೀಯ ಶಬ್ದಾರ್ಥಗಳ ಮತ್ತು ತರ್ಕ ಮಾದರಿಗಳ ವಿಶ್ಲೇಷಣೆ ಮತ್ತು ಪರಿಷ್ಕರಿಸುವಿಕೆ.

	ರಾಜಕೀಯ ತತ್ತ್ವಗಳ ವ್ಯಾಪ್ತಿ ರಾಜಕೀಯದಲ್ಲಿನ ನೈತಿಕ ಪ್ರಶ್ನೆಗಳ ಮೇಲೆ ಕ್ರೋಢೀಕರಿಸಿದರೂ ರಾಜಕೀಯದ ಮೂಲ, ಅದರ ಆವಶ್ಯಕತೆ, ಒಳಗೊಳ್ಳುವ ಸಂಸ್ಥೆಗಳು, ಸ್ಥಾನಗಳು, ಅಧಿಕಾರ-ಕರ್ತವ್ಯಗಳು ಮತ್ತು ವ್ಯವಹಾರ, ಸಂಬಂಧಗಳು ಹಾಗೂ ಮಾದರಿಗಳ ವಿಶ್ಲೇಷಣೆ, ವಿವರಣೆ, ವಿನ್ಯಾಸ ಮತ್ತು ಪ್ರತಿಪಾದನೆಯನ್ನು ಒಳಗೊಂಡಿವೆ ಎನ್ನಬಹುದು.
ವಿಧಗಳು : ರಾಜಕೀಯ ತತ್ತ್ವಗಳನ್ನು ಮುಖ್ಯವಾಗಿ ಎರಡು ವಿಧಗಳಾಗಿ ವಿಂಗಡಿಸಬಹುದು. (1) ಪ್ರಾಚೀನ-ಅಭಿಜಾತ (ಕ್ಲಾಸಿಕಲ್) ಮಾದರಿ ರಾಜಕೀಯ ತತ್ತ್ವಗಳು (2) ಇತ್ತೀಚಿನ ವಿಶ್ಲೇಷಣಾತ್ಮಕ ರಾಜಕೀಯ ತತ್ತ್ವಗಳು.

	ಪ್ರಾಚೀನ-ಅಭಿಜಾತ ಮಾದರಿ ರಾಜಕೀಯ ತತ್ತ್ವಗಳು : ರಾಜಕೀಯ ತತ್ತ್ವe್ಞÁನದ ಸಾಂಪ್ರದಾಯಿಕ ಪ್ರಶ್ನೆಗಳು ರಾಜ್ಯಾಧಿಕಾರದ ಪ್ರಕೃತಿ, ಆವಶ್ಯಕತೆ, ಸಮರ್ಥನೆ ಮತ್ತು ವ್ಯಕ್ತಿಬದ್ಧತೆಯ ಔಚಿತ್ಯ ಮತ್ತು ಮಿತಿಗಳಿಗೆ ಸಂಬಂಧಿಸಿವೆ. ರಾಜ್ಯ ಏಕೆ, ಹೇಗೆ ಎಷ್ಟು ಮತ್ತು ಯಾರಿಂದ ನಡೆಯಬೇಕು ಎಂಬ ಪ್ರಶ್ನೆಗಳಿಗೆ ಉತ್ತರಿಸುತ್ತ ಅಭಿಜಾತ ರಾಜಕೀಯ ತತ್ತ್ವಗಳು ಉದ್ಭವಿಸಿವೆ.

ರಾಜ್ಯ ಏಕೆ ಹುಟ್ಟಿತು ಎಂಬ ಮೂಲಭೂತ ಪ್ರಶ್ನೆಗೆ ರಾಜಕೀಯ ತತ್ತ್ವe್ಞÁನಿಗಳ ಉತ್ತರ ವೈವಿಧ್ಯಮಯವಾಗಿದೆ. ಪ್ಲೇಟೋ ಮತ್ತು ಅರಿಸ್ಟಾಟಲ್‍ರವರ ಪ್ರಕಾರ ಉತ್ತಮ ಜೀವನ ನೈತಿಕ ಜೀವನ ಅಥವಾ ನ್ಯಾಯಯುತ ಸಮಾಜ ರಚಿಸಲು ಎಂದು. ಆದರೆ ಅವರ ಸಮಕಾಲೀನ ಸಹೋದ್ಯೋಗಿ ತ್ರ್ಯಾಸಿಮಾರ್ಕಸ್‍ನಿಂದ ಹಿಡಿದು ಮಾಕ್ರ್ಸ್‍ವಾದಿಗಳು. ಅರಾಜಕತಾವಾದಿಗಳು ಮತ್ತು ಇಂದಿಗೂ ನಕ್ಸಲೀಯರ ತನಕ ಕೆಲವರು ರಾಜ್ಯವನ್ನು ಯಾವ ಸಾಮಾಜಿಕ ನೈತಿಕ ಉದ್ದೇಶಗಳಿಲ್ಲದ ಬಲ ಮತ್ತು ಬಲಿಷ್ಠರ ಆಟ ಎಂದು ಪರಿಗಣಸುತ್ತಾರೆ. ಇವರ ಪ್ರಕಾರ ಬಲಿಷ್ಠ ಗುಂಪುಗಳು ಅಥವಾ ವ್ಯಕ್ತಿಗಳು ಒಂದು ಸಮುದಾಯದ ಮೇಲೆ ಹೇರಿರುವ ತಮ್ಮ ಆಳ್ವಿಕೆಯೇ ರಾಜ್ಯ. ರಾಜ್ಯ ವ್ಯವಸ್ಥೆ ಮತ್ತು ವ್ಯವಹಾರಗಳು ಹೇಗಿರಬೇಕೆಂಬ ಬಹಳಷ್ಟು ರಾಜಕೀಯ ತತ್ತ್ವಗಳು ಈ ಎರಡು ತಾತ್ತ್ವಿಕ ನಿಲುವುಗಳ ಬಗ್ಗೆಯೇ ಹೆಣೆಯಲ್ಪಟ್ಟಿವೆ.

	ರಾಜ್ಯ ಹೇಗೆ ಹುಟ್ಟಿತು ಎಂಬ ಇನ್ನೊಂದು ಮೂಲಭೂತ ಪ್ರಶ್ನೆಯೂ ರಾಜಕೀಯ ಚಿಂತನೆಯ ಅನೇಕ ಮೂಲಭೂತ ತತ್ತ್ವಗಳಿಗೆ ಎಡೆಮಾಡಿದೆ. ರಾಜ್ಯ ದೈವರಚಿತವಾದುದು ಮತ್ತು ರಾಜ ದೇವರ ವರ ಅಥವಾ ಪ್ರತಿನಿಧಿ ಎಂಬ ಧಾರ್ಮಿಕ ವಾದಗಳು ಹಾಗೂ ಹೆಗಲ್‍ರವರಂತೆ ರಾಜ್ಯ ಮೆರೆಸುವ ಆದರ್ಶವಾದಗಳೂ ರಾಜಪ್ರಭುತ್ವದ ಜೊತೆಗೆ ರಾಜನ ಸರ್ವಾಧಿಕಾರಕ್ಕೂ ಒತ್ತು ನೀಡಿದೆ. ರಾಜ್ಯ ಒಂದು ಜೈವಿಕ ವ್ಯವಸ್ಥೆ. ಸರ್ಕಾರ ಅದರ ಶಿರ ಎನ್ನುವ ವಾದವೂ ಇದಕ್ಕೆ ಹೊರತಲ್ಲ. ಸಾಮಾಜಿಕ ಒಪ್ಪಂದದಿಂದಲೇ ರಾಜ್ಯ ಹುಟ್ಟಿರುವುದು ಎಂಬ ವಾದ ಅನೇಕ ರೂಪಗಳನ್ನು ಹೊಂದಿದೆ. ಹಾಬ್ಸ್ ಅವರ ಒಪ್ಪಂದವಾದದಲ್ಲಿ ಕ್ರೂರವೂ ಅಸಹ್ಯವೂ ಆದ ಮೃಗೀಯಜೀವನ ಪರಿಸ್ಥಿತಿಯಿಂದ ಮುಕ್ತಿ ಪಡೆಯಲು ಮತ್ತು ಜೀವನ ಭದ್ರತೆಗೋಸ್ಕರ ಒಪ್ಪಂದದ ಮೂಲಕರಾಜ್ಯ ಸ್ಥಾಪಿಸಲು ಜನ ಸಮೂಹ ತಮ್ಮ ಹಕ್ಕುಗಳನ್ನೆಲ್ಲ ರಾಜನಿಗೆ ಧಾರೆ ಎರೆದುಕೊಡುವುದರಿಂದ ರಾಜನ ಸರ್ವಾಧಿಕಾರಕ್ಕೆ ಪುಷ್ಟಿ ದೊರೆಯುತ್ತದೆ. ರೂಸೋವಿನ ಒಪ್ಪಂದವಾದದಲ್ಲಿ ಈ ಒಪ್ಪಂದಕ್ಕೆ ಕಾರಣ ಮತ್ತು ಅದರ ಫಲವೂ ಸಾರ್ವಜನಿಕ ಇಚ್ಛೆಯಾಗಿರುವುದರಿಂದ ಪ್ರಜಾಪ್ರಭುತ್ವಕ್ಕೆ ಬೆಂಬಲ ಸಿಗಬೇಕಾದರೂ ಸಾರ್ವಜನಿಕ ಇಚ್ಛೆಯ ಮುಂದೆ ವ್ಯಕ್ತಿ ಇಚ್ಛೆಗಳು ಸಂಪೂರ್ಣ ಶರಣಾಗಬೇಕೆಂಬ ವಾದವೂ ಸರ್ವಾಧಿಕಾರಕ್ಕೆ ದಾರಿಯಾಗುತ್ತದೆ. ಜಾನ್‍ಲಾಕ್‍ನ ಒಪ್ಪಂದ ಸೂತ್ರದಲ್ಲಿ ಮಾತ್ರ ರಾಜ್ಯ ವ್ಯಕ್ತಿಯ ಪ್ರಕೃತಿಕ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿದ್ದು ಪ್ರಜಾಪ್ರಭುತ್ವಕ್ಕೆ, ಪ್ರತಿನಿಧಿ ಸರ್ಕಾರಕ್ಕೆ ಹಾಗೂ ಉದಾರವಾದ ತತ್ತ್ವಗಳಿಗೆ ನಾಂದಿ ಹಾಡುತ್ತದೆ. 

	ರಾಜ್ಯದಲ್ಲಿ ಯಾರು ಆಳಬೇಕು ಎಂಬ ಪ್ರಶ್ನೆಯೂ ವಿವಿಧ ಪ್ರಮುಖ ರಾಜಕೀಯ ತತ್ತ್ವಗಳಿಗೆ ದಾರಿ ಮಾಡಿದೆ. ನ್ಯಾಯ ಪ್ರತಿಪಾದನೆಯೇ ರಾಜ್ಯದ ಗುರಿ ಆಗಿರುವುದರಿಂದ ನ್ಯಾಯ ಪರಿe್ಞÁನ ಉಳ್ಳ ತತ್ತ್ವe್ಞÁನಿ ಅಥವಾ ವಿವೇಕಿ ರಾಜನ ಆಡಳಿತವನ್ನು ವಿನ್ಯಾಸಗೊಳಿಸಿ ಮತ್ತು ಬೆಂಬಲಿಸಿದ ಪ್ಲೇಟೋ ಆದರ್ಶ ರಾಜ್ಯ ಪ್ರತಿಪಾದಕನಾಗುತ್ತಾನೆ. ಇಂಥ ಆದರ್ಶ ರಾಜ್ಯದ ಅವಾಸ್ತವಿಕತೆಯ ಕಾರಣ ಅರಿಸ್ಟಾಟಲ್ ಪಾಲಿಟಿ ಎಂಬ ವಾಸ್ತವಿಕವಾಗಿ ಅತ್ಯುತ್ತಮವಾಗಿರುವ ಹಾಗೂ ಮಧ್ಯಮ ವರ್ಗದ ಪರವಾಗಿರುವ ಗುಣವಂತರ ಮತ್ತು ಪ್ರಜೆಗಳ ಸಮ್ಮಿಶ್ರ ಪ್ರಭುತ್ವ ತತ್ತ್ವವನ್ನು ಮುಂದಿಡುತ್ತಾನೆ. ರಾಜಕೀಯದಲ್ಲಿ ಪ್ರಯೋಗಶೀಲರಾಗಿದ್ದ ಗ್ರೀಕ್ ಮತ್ತು ರೋಮನ್‍ರ ಕಾಲದಲ್ಲಿ ರಾಜಪ್ರಭುತ್ವ (ಮಾನಾರ್ಕಿ), ಗುಣವಂತರ ಪ್ರಭುತ್ವ (ಅರಿಸ್ಟೋಕ್ರೆಸಿ), ಪ್ರಜಾಪ್ರಭುತ್ವ (ಡೆಮಾಕ್ರೆಸಿ), ಏಕಸ್ವಾಮ್ಯ ಸರ್ವಾಧಿಕಾರ (ಟೆರನಿ), ಬಲಿಷ್ಠರ ಪ್ರಭುತ್ವ (ಆಲಿಗಾರ್ಕಿ) ಹಾಗೂ ದೊಂಬಿರಾಜ್ಯ (ಮಾಬಾಕ್ರೆಸಿ) ತತ್ತ್ವಗಳು, ಪ್ರಯೋಗಗಳೂ ಪ್ರಚಲಿತವಾಗಿದ್ದವು. ಗ್ರೀಕ್ ಮತ್ತು ರೋಮನ್‍ರು ಗಣರಾಜ್ಯ ತತ್ತ್ವಾಚರಣೆಗೆ ಪ್ರಖ್ಯಾತರಾಗಿದ್ದರೂ ಅಲೆಗ್ಸಾಂಡರ್ ಮತ್ತು ರೋಮನ್ ಸಾಮ್ರಾಜ್ಯಗಳು ಸಾಮ್ರಾಟವಾದ ಮತ್ತು ಸಾಮ್ರಾಜ್ಯವಾದಗಳ ಕೊಡುಗೆಯನ್ನೂ ಕೊಟ್ಟವು. ಮಧ್ಯಯುಗದಲ್ಲಿ ಚರ್ಚ್ ಪ್ರಬಲಗೊಂಡು ಚರ್ಚ್ ಮತ್ತು ರಾಜ್ಯದ ಮಧ್ಯೆ ಭಿನ್ನಾಭಿಪ್ರಾಯ ಬೆಳೆದು ಅರಾಜಕತೆ ಕಾಣತೊಡಗಿದಾಗ ಸಾಮ್ರಾಟವಾದ ಪುನರಾವರ್ತಿಸಿ, ರಾಜ್ಯದ ಸಾರ್ವಭೌಮತ್ವತತ್ತ್ವ ಮುಂದುವರೆದು ಆಧುನಿಕ ಯುಗದಲ್ಲಿ ಮೆಕೆವಲಿ, ಹಾಬ್ಸ್ ಹಾಗೂ ಹೆಗೆಲ್ ಅವರ ಕೈಯಲ್ಲಿ ನಿರಂಕುಶ ಪ್ರಭುತ್ವ ತತ್ತ್ವಕ್ಕೂ ದಾರಿಯಾಯಿತು.
ಲಾಕ್‍ನ ಪ್ರಾಕೃತಿಕ ಹಕ್ಕು ಆಧಾರಿತ ಉದಾರವಾದ ಹಾಗೂ ಪ್ರತಿನಿಧಿ ಸರ್ಕಾರದ ಪರಿಕಲ್ಪನೆಗಳೂ ಪ್ರಯೋಜಕತಾವಾದಿಗಳ ವ್ಯಕ್ತಿವಾದ ಮತ್ತು ಬಹುಸಂಖ್ಯಾ ಸರ್ಕಾರವಾದ, ಜೆ.ಎಸ್.ಮಿಲ್ ಅವರ ಅಲ್ಪಸಂಖ್ಯಾತ ಹಕ್ಕುಗಳ ವಾದ ಮತ್ತು ಸುಧಾರಿತ ಉದಾರವಾದಗಳು ಹಾಗೂ ಟಿ.ಎಚ್. ಗ್ರೀನ್ ಅವರ ಸುಧಾರಿತ ಆದರ್ಶವಾದ ಮತ್ತು ಪ್ರಜಾಪ್ರಭುತ್ವೀಯ ಉದಾರವಾದಗಳು ಆಧುನಿಕ ಪ್ರಜಾಪ್ರಭುತ್ವ ತತ್ತ್ವದ ವಿಕಾಸಕ್ಕೆ ದಾರಿಮಾಡಿದವು. ಬ್ರಿಟಿಷ್, ಫ್ರೆಂಚ್ ಮತ್ತು ಅಮೆರಿಕನ್ ಕ್ರಾಂತಿಗಳು ಇದನ್ನು ಸಾಕಾರಗೊಳಿಸಿ ಬಲಪಡಿಸಿದವು. ಈ ಹಿನ್ನೆಲೆಯಲ್ಲಿ ಕಾನೂನುಬದ್ಧ ಆಡಳಿತ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ರಾಷ್ಟ್ರೀಯತಾವಾದ, ಸಂವಿಧಾನಾತ್ಮಕ ಸರ್ಕಾರ, ಸಂವಿಧಾನಿಕ ಹಕ್ಕುಗಳು ಮುಂತಾದ ಜಾಗತಿಕ ಪ್ರಜಾಪ್ರಭುತ್ವೀಯ ತತ್ತ್ವಗಳು ರೂಪುಗೊಂಡವು.

	ವ್ಯಕ್ತಿವಾದಿ ಬಂಡವಾಳಶಾಹಿ ರಾಜ್ಯದಲ್ಲಿ ಪ್ರಜಾರಾಜ್ಯವೆಂಬುದು ಬರೀ ಭ್ರಮೆ ಎಂಬ ವಾದ ಮಂಡಿಸಿದ ಮಾಕ್ರ್ಸ್‍ನ ಸಮತಾವಾದ ಎಲ್ಲ ರಾಜ್ಯಗಳು ವರ್ಗ ಸರ್ವಾಧಿಕಾರದಿಂದ ಕೂಡಿದ್ದು ರಾಜ್ಯ ಯಾವಾಗಲೂ ಆಳುವ ವರ್ಗದ ಕೈಗೊಂಬೆ. ಆದ್ದರಿಂದ ಸಮತಾವಾದದ ಕ್ರಾಂತಿ ನಡೆದು ಕಾರ್ಮಿಕ ಸರ್ವಾಧಿಕಾರದ ಮೂಲಕ ವರ್ಗರಹಿತ ಸಮಾಜ ಸ್ಥಾಪನೆ ಮಾಡಿದ ಮೇಲೆಯೇ ರಾಜ್ಯ ಅಳಿದು ಹೋಗಿ ನೈಜ ಪ್ರಜಾಪ್ರಭುತ್ವ ಸಾಧ್ಯವಾಗುವುದು ಎಂಬ ವಾದ ರೂಪಿತವಾಯಿತು. ಉದಾರವಾದ ಮತ್ತು ಮಾಕ್ರ್ಸ್‍ವಾದಗಳೆರಡಕ್ಕೂ ವಿರೋಧವಾದ ಫ್ಯಾಸಿಸ್ಟ್‍ವಾದ ಉತ್ತಮ ಆಳ್ವಿಕೆ ಮತ್ತು ಇಡೀ ಸಮುದಾಯದ ಹಿತಸಾಧನೆ ಸರ್ವಾಧಿಕಾರ ನಾಯಕತ್ವದಿಂದ ಮಾತ್ರ ಸಾಧ್ಯವೆಂಬ ಬಲಪಂಥೀಯ ತತ್ತ್ವವನ್ನು ಮುಂದುವರೆಸಿತು. ಆದರೆ ಎರಡನೆಯ ಮಹಾಯುದ್ಧದಲ್ಲಿ ಫ್ಯಾಸಿಸಂ ಸೋತಿತು ಹಾಗೂ ಮುಂದೆ 1980ರ ದಶಕದಲ್ಲಿ ಯುರೋಪಿನಲ್ಲಿ ಕಮ್ಯುನಿಸ್ಟ್ ಅಥವಾ ಸಮತಾವಾದಿ ರಾಜ್ಯಗಳು ಅಂತ್ಯವಾದ ಮೇಲೆ ಪ್ರಜಾಪ್ರಭುತ್ವ ತತ್ತ್ವವೇ ಪ್ರಬಲವಾಯಿತು. ಪ್ರಜಾಪ್ರಭುತ್ವದ ಸುಧಾರಣೆ, ಉತ್ತಮೀಕರಣ ಮತ್ತು ವಿಸ್ತರಣೆಗಳೇ ಇಂದಿನ ರಾಜಕೀಯ ಚಿಂತನೆಯ ಗುರಿ.

	ರಾಜ್ಯ ವ್ಯವಹಾರಗಳ ಕಾರ್ಯ ಮತ್ತು ವ್ಯಾಪ್ತಿಯನ್ನು ಕುರಿತ ಚಿಂತನೆಯೂ ರಾಜಕೀಯ ತತ್ತ್ವಗಳಿಗೆ ದಾರಿ ಮಾಡಿದೆ. ಪ್ಲೇಟೊವಿನಿಂದ ಹಿಡಿದು ಕಮ್ಯೂನಿಸ್ಟ್ ಮತ್ತು ಫ್ಯಾಸಿಸ್ಟ ಸರ್ವಾಧಿಕಾರತ್ವದವರೆಗೂ ಎಲ್ಲ ಸರ್ವಾಧಿಕಾರಗಳೂ ಅನಿರ್ಬಂಧಿತ ರಾಜ್ಯ ಕಾರ್ಯವ್ಯಾಪ್ತಿಯಲ್ಲಿ ನಂಬುಗೆ ತೋರಿವೆ. ಉದರವಾದ ಮತ್ತು ಪ್ರಜಾಪ್ರಭುತ್ವ ವಾದಗಳಲ್ಲಿ ರಾಜ್ಯ ಕಾರ್ಯವ್ಯಾಪ್ತಿಯ ಬಗ್ಗೆ ಪ್ರಾರಂಭದಲ್ಲಿ ಸಾರ್ವಜನಿಕ ಭದ್ರತೆಗೆ ಸೀಮಿತವಾದ ಕಾರ್ಯಪರಿಕಲ್ಪನೆ ಇದ್ದರೂ ಕ್ರಮೇಣ ಸಮಾಜವಾದದ ಪ್ರಭಾವದಿಂದ ಕಲ್ಯಾಣರಾಜ್ಯ, ಪ್ರಜಾಪ್ರಭುತ್ವ ಸಮಾಜವಾದ, ಯೋಜಿತ ಅಭಿವೃದ್ಧಿ ಪರಿಕಲ್ಪನೆಗಳುಂಟಾಗಿ ರಾಜ್ಯದ ಕಾರ್ಯವ್ಯಾಪ್ತಿಯನ್ನು ಸಾಮಾಜಿಕ ಮತ್ತು ಆರ್ಥಿಕ ಭದ್ರತೆ, ಕಲ್ಯಾಣ ಮತ್ತು ಅಭಿವೃದ್ಧಿಗಳಿಗೂ ವಿಸ್ತರಿಸಿದವು. ಆದರೆ 1980 ರಿಂದ ಈಚೆಗೆ ನವ-ಉದರವಾದದ ಪ್ರಭಾವದಲ್ಲಿ ರಾಜ್ಯ ತನ್ನ ಕಾರ್ಯಕ್ಷೇತ್ರವನ್ನು ಕುಗ್ಗಿಸಿಕೊಂಡು ಖಾಸಗೀಕರಣ, ಉದಾರೀಕರಣ ಹಾಗೂ ಜಾಗತೀಕರಣ ತತ್ತ್ವಗಳನ್ನು ಅನುಸರಿಸಬೇಕೆಂಬ ಒಲವು ಹೆಚ್ಚಾಗಿ ಕಂಡುಬರುತ್ತಿದೆ. ಭ್ರಷ್ಠ ಅಧಿಕಾರ ಮತ್ತು ಆಳ್ವಿಕೆ ತಡೆಯಲು ಮಾನವೀಯ ಹಕ್ಕುಗಳು ಸರ್ಕಾರದಿಂದ ಮಾಹಿತಿ ಪಡೆಯುವ ಹಕ್ಕು ಮತ್ತು ಖಾಸಗೀ ಸ್ವಾತಂತ್ರ್ಯ ಹಕ್ಕುಗಳೆಂಬ ಹೊಸ ಹಕ್ಕುಗಳಿಗೆ ಸಂಬಂಧಿಸಿದ ತತ್ತ್ವಗಳೂ ಉದ್ಭವಿಸಿವೆ. ರಾಜ್ಯದಲ್ಲಿ ನ್ಯಾಯ ಸಂಚಯ ವೃತ್ತವನ್ನು ವಿಸ್ತರಿಸಲು ಸಾಮಾಜಿಕ ಮತ್ತು ಆರ್ಥಿಕವಾಗಿ ದುರ್ಬಲರೂ ಹಿಂದುಳಿದವರೂ ಆದ ವರ್ಗಗಳಿಗೆ ಶಕ್ತಿಸಂಚಯ ಆಗಬೇಕೆಂಬ ತತ್ತ್ವದ ಬೆಳವಣಿಗೆಯೂ ಆಗಿದೆ.

	ರಾಜ್ಯದ ಆಡಳಿತಾಂಗಗಳನ್ನು ಹೇಗೆ ವ್ಯವಸ್ಥೆಗೊಳಿಸಬೇಕೆಂಬ ಪ್ರಶ್ನೆ ಸಂವಿಧನಾತ್ಮಕ ಸರ್ಕಾರತತ್ತ್ವ. ಪ್ರತಿನಿಧಿ ಸರ್ಕಾರ ತತ್ತ್ವ ಅಧಿಕಾರ ವಿಭಜನಾತತ್ತ್ವ, ಕೇಂದ್ರೀಕರಣ ವಿಕೇಂದ್ರೀಕರಣ ತತ್ತ್ವ, ಏಕಾತ್ಮಕ ಸರ್ಕಾರ ಮತ್ತು ಒಕ್ಕೂಟ ಸರ್ಕಾರ ತತ್ತ್ವ, ಗಾಂಧೀಜಿಯವರ ಗ್ರಾಮಸ್ವರಾಜ್ಯ-ಲೋಕನೀತಿತತ್ತ್ವ, ಸಾಮಾಜಿಕ ರಾಜಕೀಯ ಶಕ್ತಿಕೇಂದ್ರಗಳ ಬಹುತ್ವವಾದ, ಜವಾಬ್ದಾರಿ ಸರ್ಕಾರ, ಹಾಗೂ ಪಾರದರ್ಶಕ ಆಡಳಿತ ತತ್ತ್ವ ಈ ಬಗೆಯ ಮಾದರಿಗಳಿಗೆ ದಾರಿಮಾಡಿತು.

	ಇತ್ತೀಚೆಗೆ ವಿಶ್ಲೇಷಣಾತ್ಮಕ ರಾಜಕೀಯ ತತ್ತ್ವಗಳು: ರಾಜಕೀಯ ತತ್ತ್ವಶಾಸ್ತ್ರದಲ್ಲೂ ಇತರ ತತ್ತ್ವಶಾಸ್ತ್ರದಲ್ಲಿದ್ದಂತೆ, ವಿಷಯವನ್ನು ಆಳವಾಗಿ ಅಧ್ಯಯನ ಮಾಡಲು ಭೌತಾತೀತತತ್ತ್ವಶಾಸ್ತ್ರ (ಮೆಟಾಫಿಸಿಕ್ಸ್), e್ಞÁನಶಾಸ್ತ್ರ (ಎಪಿಸ್ಟೀಮಾಲೊಜಿ), ತರ್ಕಶಾಸ್ತ್ರ (ಲಾಜಿಕ್) ಹಾಗೂ ನೀತಿಶಾಸ್ತ್ರಗಳನ್ನು (ಎತಿಕ್ಸ್) ಬಳಸಲಾಗಿದೆ. ಪ್ಲೇಟೊ ಹೆಗಲ್, ಕಾಂಟ್, ಗ್ರೀನ್ ಮುಂತಾದವರು ಭೌತಾತೀತ ತತ್ತ್ವಶಾಸ್ತ್ರ ವಿಧಾನಗಳನ್ನು ಬಳಸಿ ತಮ್ಮ ಆದರ್ಶವಾದವನ್ನು ಮಂಡಿಸುತ್ತಾರೆ. ಅರಿಸ್ಟಾಟಲ್, ಗ್ರೀನ್, ಒಸಾಂಕೆ ಮುಂತಾದವರು ನೀತಿಶಾಸ್ತ್ರವನ್ನು ಹೆಚ್ಚು ಬಳಸಿದ್ದಾರೆ. ತರ್ಕಶಾಸ್ತ್ರವನ್ನು ಹೆಚ್ಚು ಕಡಿಮೆ ಎಲ್ಲರೂ ಬಳಸಿದ್ದಾರೆ. ಹಾಬ್ಸ್, ಮಾಕ್ರ್ಸ್ ಮತ್ತು ಅವರ ಅನುಯಾಯಿಗಳು ಭೌತಿಕವಾದ (ಮೆಟೀರಿಯಲಿಸಂ) ಆಧಾರಿತ ತರ್ಕ ಬಳಸಿ ರಾಜಕೀಯ ತತ್ತ್ವe್ಞÁನವನ್ನು ವಿe್ಞÁನಕ್ಕೆ ಹತ್ತಿರ ತರುವ ಪ್ರಯತ್ನ ಆರಂಭಿಸಿದರು. ಜೀವ ವಿe್ಞÁನ, ಮನೋವಿe್ಞÁನ, ಅರ್ಥಶಾಸ್ತ್ರ ಮತ್ತು ಸಮಾಜವಿe್ಞÁನ ಅಭಿವೃದ್ಧಿ ಹೊಂದಿದಂತೆ ವಿಕಾಸಗೊಂಡ ಮಾನವನ ಹಾಗೂ ಸಮಾಜದ ಬಗೆಗಿನ ವಿವಿಧ ದೃಷ್ಟಿಕೋನಗಳು ಆಧುನಿಕ ವ್ಯಕ್ತಿವಾದ, ಮಾಕ್ರ್ಸ್‍ವಾದ ಹಾಗೂ ಇವುಗಳ ಅನಂತರದ ರಾಜಕೀಯ ಚಿಂತನೆಗೆ ದಾರಿಮಾಡಿದೆ.

	ರಾಜಕೀಯ ತತ್ತ್ವಶಾಸ್ತ್ರದಲ್ಲಿ e್ಞÁನಶಾಸ್ತ್ರವನ್ನೇ (ಎಪಿಸ್ಟೀಮಾಲೊಜಿ) ಬಂಡವಾಳವನ್ನಾಗಿ ಮಾಡಿಕೊಂಡವರೆಂದರೆ ವಿಶ್ಲೇಷಣಾ ತತ್ತ್ವe್ಞÁನಿಗಳು (ಅನಲಿಟಿಕಲ್ ಫಿಲಾಸಫರ್ಸ್) ಎನ್ನಬಹುದು. ಇವರು ರಾಜಕೀಯ ತತ್ತ್ವಶಾಸ್ತ್ರದ ಭಾಷೆ ಹಾಗೂ ವಿಶ್ಲೇಷಣಾ ತರ್ಕವಿಧಾನಗಳ ಪರಿಶುದ್ಧತೆಗೆ ವಿಪರೀತ ಒತ್ತು ನೀಡುತ್ತಾರೆ. ಇವರ ಕೈಯಲ್ಲಿ ರಾಜಕೀಯ ತತ್ತ್ವe್ಞÁನ ತನ್ನ ಪ್ರಮುಖ ಕರ್ತವ್ಯವಾದ ಮೌಲ್ಯ ಗುಣಮಟ್ಟ ನಿರ್ಧರಣೆಗಳಿಂದ ವಿಮುಖವಾಗಿ ಮೌಲ್ಯ-ತಾಟಸ್ಥ್ಯವನ್ನು ಅನುಸರಿಸಿ ವಿe್ಞÁನ ತತ್ತ್ವಶಾಸ್ತ್ರದ (ಫಿಲಾಸಫಿ ಆಫ್ ಸೈನ್ಸ್) ಒಂದು ಅಂಗವಾಗುತ್ತದೆ. ಈ ದಾರಿ ರಾಜಕೀಯ ಚಿಂತನೆಯನ್ನು ಆಧುನಿಕ ರಾಜ್ಯಶಾಸ್ತ್ರ ಅಥವಾ ರಾಜಕೀಯ ವಿe್ಞÁನವನ್ನಾಗಿಸುತ್ತದೆ.

	ರಾಜಕೀಯ ತತ್ತ್ವe್ಞÁನ ಮತ್ತು ರಾಜಕೀಯ ವಿe್ಞÁನ ಸಂಬಂಧ: ರಾಜಕೀಯ ತತ್ತ್ವe್ಞÁನ ಪುರಾತನವಾದದ್ದು. ರಾಜಕೀಯ ವಿe್ಞÁನ ಅಥವಾ ರಾಜ್ಯ ಶಾಸ್ತ್ರ 19ನೆಯ ಶತಮಾನದಿಂದ ಬೆಳೆದು ಬಂದುದು. ರಾಜಕೀಯ ತತ್ತ್ವe್ಞÁನದಲ್ಲೂ ತರ್ಕಪೂರಿತವಾದ ವಿಧಿ ವಿಧಾನಗಳಿದ್ದರೂ ಅವುಗಳು ವಿe್ಞÁನದಲ್ಲಿರುವಂತೆ ವ್ಯವಸ್ಥಿತವಾಗಿಲ್ಲ. ಆಧುನಿಕ ರಾಜಕೀಯ ವಿe್ಞÁನ, ಆಧುನಿಕ ಜೀವವಿe್ಞÁನ, ಮನೋವಿe್ಞÁನ ಮತ್ತು ಸಮಾಜವಿe್ಞÁನಗಳಂತೆ ವಸ್ತುನಿಷ್ಠವಾಗಿದ್ದು, ತರ್ಕಬದ್ಧ ದೃಷ್ಟಿ ಪ್ರಮಾಣವಾದ (ಲಾಜಿಕಲ್ ಪಾಸಿಟಿವಿಸಂ) ಮತ್ತು ಚರ್ಯಾವಾದಗಳನ್ನು ಅನುಸರಿಸಿ ಪ್ರಮಾಣಾತ್ಮಕ ಹಾಗೂ ಪ್ರಯೋಗಾತ್ಮಕ ವಿಧಾನಗಳಿಗೆ ಒತ್ತು ನೀಡುತ್ತದೆ. ಹಾಗೂ ಮೌಲ್ಯ ತಾಟಸ್ಥ್ಯವನ್ನು ಪ್ರತಿಪಾದಿಸುತ್ತದೆ. ರಾಜಕೀಯ ತತ್ತ್ವe್ಞÁನ ಮೂಲತಃ ಮೌಲ್ಯಾಭಿಮುಖವಾಗಿದ್ದು ರಾಜಕೀಯ ನೈತಿಕಾಂಶಗಳ ವಿಶ್ಲೇಷಣೆಗೆ ಹೆಚ್ಚು ಒತ್ತು ನೀಡುತ್ತದೆ. ಆದರೂ ರಾಜಕೀಯ ವಿಷಯದ ಪ್ರಕೃತಿ ಬೇರೆ ಎಲ್ಲ ಅಧ್ಯಯನದ ವಿಷಯಗಳಿಗಿಂತ ಹೆಚ್ಚಾಗಿ ಮಾನವೀಯ ನೈತಿಕ ಪ್ರಶ್ನೆಗಳೊಡನೆ ಹೆಣೆದುಕೊಂಡಿದ್ದು ರಾಜ್ಯಶಾಸ್ತ್ರ ಇಂದೂ ಈ ಪ್ರಶ್ನೆಗಳಿಂದ ಮುಕ್ತಿ ಪಡೆದಿಲ್ಲ. ಉತ್ತರ ಚರ್ಯವಾದ ಪಂಥ ರಾಜ್ಯಶಾಸ್ತ್ರ ವಸ್ತು-ಮೌಲ್ಯ ದ್ವಂದ್ವಕ್ಕೆ ಸಮನ್ವಯ ತರುವ ಪ್ರಯತ್ನ ಮಾಡಿ ಮುಂದಿನ ಬಾಗಿಲಿನಿಂದ ತತ್ತ್ವe್ಞÁನವನ್ನು ಓಡಿಸಿ ಹಿಂದಿನ ಬಾಗಿಲಿನಿಂದ ಮತ್ತೆ ಅದನ್ನು ಒಳಗೆ ಸೇರಿಸಿಕೊಂಡರೆಂಬ ಹೇಳಿಕೆಯಿದೆ. ರಾಜಕೀಯ ತತ್ತ್ವe್ಞÁನದ ಅರಿವು ವಿಶ್ಲೇಷಣೆಗಳು ರಾಜ್ಯಶಾಸ್ತ್ರ ವಿಶ್ಲೇಷಣೆಯ ಆರಂಭ ಮತ್ತು ಅಂತ್ಯಗಳೆರಡರಲ್ಲೂ ಅನಿವಾರ್ಯವಾಗಿ ಹೆಣೆದುಕೊಂಡಿರುವುದು ಕಂಡುಬರುತ್ತದೆ. 

	ಉಪಯೋಗ : ರಾಜಕೀಯ ತತ್ತ್ವಗಳಿಂದ ಅನೇಕ ಉಪಯೋಗಗಳಿವೆ. ಮೊದಲಿಗೆ ಇದು ರಾಜ್ಯಶಾಸ್ತ್ರದ ಹಿಂಬದಿ e್ಞÁನವಾಗಿ ರಾಜ್ಯಶಾಸ್ತ್ರದ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಎರಡನೆಯದಾಗಿ, ಇದು ರಾಜ್ಯಶಾಸ್ತ್ರಕ್ಕೆ ಎಟುಕದ ರಾಜಕೀಯ ಅಗೋಚರ ಸತ್ವ ಸತ್ಯಗಳ ವಿಶ್ಲೇಷಣೆಗೆ ದಾರಿಮಾಡುತ್ತದೆ. ಮೂರನೆಯದಾಗಿ, ಮಾನವನ ರಾಜಕೀಯ ಚರಿತ್ರೆ ಮತ್ತು ಚಿಂತನೆಗಳ ಮೇಲೆ ಬೆಳಕು ಚೆಲ್ಲಿ ರಾಜಕೀಯ e್ಞÁನ ಮತ್ತು ವಿವೇಕದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ನಾಲ್ಕನೆಯದಾಗಿ ರಾಜಕೀಯದಲ್ಲಿನ ನೈತಿಕ ಪ್ರಶ್ನೆಗಳನ್ನು ಹಾಗೂ ಆಚಾರ ವಿಚಾರಗಳ ನಡುವಿನ ದ್ವಂದ್ವವನ್ನೂ ಗುರುತಿಸಿ ಹೊಸ ರಾಜಕೀಯ ತತ್ತ್ವಗಳನ್ನು ಮುಂದಿಡುವ ಮೂಲಕ ರಾಜಕೀಯ ನೀತಿ ರೀತಿಗಳ ಸುಧಾರಣೆಗೆ ದಾರಿ ಮಾಡುತ್ತದೆ. ರಾಜಕೀಯ ತತ್ತ್ವಗಳ ವರ್ತಮಾನ ಮತ್ತು ಭವಿಷ್ಯ ಕುರಿತಂತೆ ಹೇಳುವುದಾದರೆ ಈಗಿನ 20ನೆಯ ಶತಮಾನ ರಾಜಕೀಯ ವಿe್ಞÁನದ ಯುಗವಾಗಿದ್ದು ಪ್ರಾಚೀನ-ಅಭಿಜಾತ (ಕ್ಲಾಸಿಕಲ್) ಮಾದರಿ ರಾಜಕೀಯ ತತ್ತ್ವ ಚಿಂತನೆ ಹಿಂದೆ ಸರಿದಿದೆ ಎನ್ನಬಹುದು. ಅದೇನೇ ಇರಲಿ ಇದು ಪರಿಚಲಿತವಾಗಿರುವ ರಾಜಕೀಯ ತತ್ತ್ವಗಳೆಲ್ಲ ಸುಮಾರು 150 ವರ್ಷಗಳಷ್ಟು ಹಿಂದಿನದಾಗಿವೆ. ಡೇವಿಡ್ ಈಸ್ಟನ್‍ರವರು ಇದಕ್ಕೆ ನೀಡಿರುವ ಕಾರಣಗಳು ಇಂತಿವೆ: (1) 20ನೆಯ ಶತಮಾನದ ರಾಜಕೀಯ ತತ್ತ್ವಗಳ ಚಿಂತಕರು ಐತಿಹಾಸಿಕ ನಿರ್ಧಾರವಾದವನ್ನು (ಹಿಸ್ಟಾರಿಸಿಸಂ) ಅನುಸರಿಸಿ ಹಳೆಯ ಮೌಲ್ಯಗಳನ್ನು ಅಧ್ಯಯನ ಮಾಡುವುದರಲ್ಲೇ ತೊಡಗಿದ್ದು (2) ವಿe್ಞÁನದ ಹೆಸರಿನಲ್ಲಿ ವಿಪರೀತ ವಸ್ತುನಿಷ್ಠತಾವಾದವನ್ನು (ಹೈಪರ್ ಫ್ಯಾಕ್ಚುಯಲಿಸಂ) ಅನುಸರಿಸಿ ಮೌಲ್ಯಗಳಿಗಿಂತ ವಾಸ್ತವಿಕ ವಿಶ್ಲೇಷಣೆಯಲ್ಲಿ ತೊಡಗಿದ್ದು (3) ರಾಜಕೀಯ ಸಿದ್ಧಾಂತಗಳ ಯುಗವೆಂದು (ಏಜ್ ಆಫ್ ಐಡಿಯಾಲಜೀಸ್) ಕರೆಯಲ್ಪಟ್ಟ 20 ನೆಯ ಶತಮಾನದಲ್ಲಿ ತಾತ್ತ್ವಿಕ ಚಿಂತನೆಗಿಂತ ಧಾರ್ಮಿಕಚಿಂತನೆಗೆ ಹತ್ತಿರವಾದ ಕಮ್ಯೂನಿಸಂ, ಫ್ಯಾಸಿಸಂ ಮುಂತಾದ ಸಿದ್ಧಾಂತಗಳ ಉತ್ತುಂಗ ಪರಿಸ್ಥಿತಿ (4) ಎರಡನೆಯ ಮಹಾಯುದ್ಧದ ಅನಂತರ ಕಂಡುಬಂದಿರುವ (ಅ) ಪ್ರಜಾಪ್ರಭುತ್ವದ ಗೆಲವು (ಆ) ವಿe್ಞÁನ ಮತ್ತು ತಂತ್ರe್ಞÁನಗಳು ತಂದ ಸಂಪತ್ತು ಮತ್ತು ಭೋಗಲಾಲಸೆ ಹಾಗೂ (ಇ) ಫ್ಯಾಸಿಸಂ ಮತ್ತು ಕಮ್ಯೂನಿಸಂಗಳು ಅಂತ್ಯವಾಗಿ ಪ್ರಜಾಪ್ರಭುತ್ವ ಮತ್ತು ಬಂಡವಾಳಶಾಹಿ ವ್ಯವಸ್ಥೆಗಳು ಸುಧಾರಿಸಿ ವಿಸ್ತರಿಸಿ ಯೋಜಿತ ಅಭಿವೃದ್ಧಿ ಮತ್ತು ಅಂತ್ಯೋದಯಗಳಲ್ಲಿ ತೊಡಗಿ ಸಾಮಾಜಿಕ ಮತ್ತು ಸೈದ್ಧಾಂತಿಕ ವೈರುಧ್ಯಗಳು ಕಡಿಮೆಯಾಗಿ ಸಿದ್ಧಾಂತದ ಅಂತ್ಯ (ಎಂಡ್ ಆಫ್ ಐಡಿಯಾಲಜಿ) ಪರಿಸ್ಥಿತಿ ಉದ್ಭವಿಸಿರುವುದು. ಈ ಬಗೆಯ ಆಲೋಚನೆಯ ನಡುವೆಯೂ ರಾಜಕೀಯ ತಾತ್ತ್ವಿಕ ಚಿಂತನೆ ಪೂರ್ಣವಾಗಿ ಮಾಯವಾಗದೇ ತನ್ನ ರೂಪ ಬದಲಿಸಿರುವುದನ್ನು ಕಾಣಬಹುದು. ಉದಾಹರಣೆಗೆ ರಾಜಕೀಯ ವಿe್ಞÁನಿಗಳಾದ ಶಂಪೀಟರ್, ರಾಬರ್ಟ್ ದ್ವಾಲ್ ಮುಂತಾದವರು ಪ್ರಜಾಪ್ರಭುತ್ವ ತತ್ತ್ವ ಚಿಂತನೆಯ ಮುಂದುವರಿಕೆಗೆ ನೀಡಿರುವ ಕೊಡುಗೆಗಳನ್ನು ವೈe್ಞÁನಿಕ ತತ್ತ್ವಗಳೋ ಅಥವಾ ತತ್ತಶಾಸ್ತ್ರದ ಹೇಳಿಕೆಗಳೋ ಎಂದು ನಿರ್ಧರಿಸುವುದೇ ಕಷ್ಟವಾಗುತ್ತದೆ. ಅದೂ ಅಲ್ಲದೇ ಎಚ್.ಜೆ.ಲಾಸ್ಕಿ, ಲಿಯೋಸ್ಟ್ರಾಸ್, ಈಸಯ್ಯ ಬರ್ಲಿನ್, ಮೈಕೆಲ್ ಓಕ್‍ಶಾಟ್, ಜಾನ್‍ರಾಲ್ಸ್ ಮುಂತಾದವರು ರಾಜಕೀಯ ತಾತ್ತ್ವಿಕ ಚಿಂತೆನೆಯನ್ನು ಪ್ರಾಚೀನ-ಅಭಿಜಾತ ಮಾದರಿಯಲ್ಲೇ ಮುಂದುವರೆಸಲು ಮಾಡಿರುವ ಕೊಡುಗೆಗಳನ್ನು ಗಮನಿಸಿದರೆ ಪ್ರಾಚೀನ ಚಿಂತನೆ ಮುಂದುವರೆಯುತ್ತಿರುವುದನ್ನೂ ಕಾಣಬಹುದು.

	ಕೊನೆಯದಾಗಿ ರಾಜಕೀಯ ಮತ್ತು ರಾಜಕೀಯ ತತ್ತ್ವಗಳೆರಡಕ್ಕೂ ಆದಿ ಅಂತ್ಯಗಳಿಲ್ಲ ಹಾಗೂ ಪಕ್ವಪರಿಪೂರ್ಣತೆಗಳಿಲ್ಲ. ಸಮಾಜ ಎಷ್ಟು ಕ್ಲಿಷ್ಟ ಮತ್ತು ಅಲ್ಲಿ ನ್ಯಾಯ ಸ್ಥಾಪಿಸುವುದು ಎಷ್ಟು ಕಷ್ಟವೆಂಬುದನ್ನು ಆಲೋಚಿಸಿದರೆ ಎಲ್ಲ ರಾಜಕೀಯ ಮತ್ತು ರಾಜಕೀಯ ತತ್ತ್ವಗಳ ತಾತ್ಕಾಲಿಕ ಮೌಲ್ಯಗಳು ಎಷ್ಟು ಎಂಬುದರ ಅರ್ಥವಾಗುತ್ತದೆ. ಎಲ್ಲ ದೇಶ ಮತ್ತು ಕಾಲದ ರಾಜಕೀಯ ಆಯಾಯ ಸಮಾಜದ ವಸ್ತುಸ್ಥಿತಿ ಮತ್ತು ನೈತಿಕ ಕನಸುಗಳ ನಡುವಿನ ಒಂದು ಜಿe್ಞÁಸೆ. ಆದ್ದರಿಂದ ತತ್ತ್ವರಹಿತ ರಾಜಕೀಯ ಸಾಧ್ಯವಿಲ್ಲ. ರಾಜಕೀಯ ಹಾಗೂ ರಾಜಕೀಯ ತತ್ತ್ವಗಳಲ್ಲಿ ಕಂಡುಬರುವ ವೈವಿಧ್ಯಗಳು, ವೈರುಧ್ಯಗಳು, ಅನ್ಯೋನ್ಯಗಳು, ಅಸಮಾಧಾನ-ತಿಕ್ಕಾಟಗಳು ಹಾಗೂ ಹೊಸ ರಾಜಕೀಯ ತತ್ತ್ವಗಳಿಗಾಗಿ ಅನ್ವೇಷಣೆಗಳು ನಿರಂತರವಾದವು.		
	(ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ